Class 5 kannada grammar ಕನ್ನಡ ವ್ಯಾಕರಣ ಈ ಒಂದು ಬ್ಲಾಗ್ ಲೇಖನದಲ್ಲಿ ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳ 5ನೇ ತರಗತಿ ಸಿರಿ ಕನ್ನಡ ವಿಷಯದ ಅಧ್ಯಾಯಗಲ್ಲಿ ನೀಡಲಾಗಿರುವ kannada grammar ಕನ್ನಡ ವ್ಯಾಕರಣ ಅಂಶಗಳನ್ನು ನೀಡಲಾಗಿದೆ.
ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ನನ್ನ ಈ ಕನ್ನಡಿಗರ ಬ್ಲಾಗ್ https://www.kannadaeshikshaka.in/ ಗೆ ಹೃದಯ ಪೂರ್ವಕ ಸ್ವಾಗತ, ಈ ಒಂದು ಬ್ಲಾಗ್ ಲೇಖನದಲ್ಲಿ ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳ 5ನೇ ತರಗತಿ ಸಿರಿ ಕನ್ನಡ ವಿಷಯದ ಅಧ್ಯಾಯಗಲ್ಲಿ ನೀಡಲಾಗಿರುವ kannada grammar ಕನ್ನಡ ವ್ಯಾಕರಣ ಅಂಶಗಳನ್ನು ನೀಡಲಾಗಿದೆ. ಈ ಕನ್ನಡ ವ್ಯಾಕರಣ ಅಂಶಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.
Class 5 Kannada Grammar ಕನ್ನಡ ವ್ಯಾಕರಣ-ವರ್ಣಮಾಲೆ.
ಕನ್ನಡದಲ್ಲಿ ಒಟ್ಟು ೪೯ ಅಕ್ಷರಗಳಿವೆ. ಇವುಗಳನ್ನು ವರ್ಣಗಳೆಂದು ಕರೆಯುತ್ತಾರೆ. ಈ ಅಕ್ಷರಗಳ ಕ್ರಮಬದ್ಧ ಜೋಡಣೆಗೆ ‘ವರ್ಣಮಾಲೆ’ ಅಥವಾ ‘ಅಕ್ಷರಮಾಲೆ’ ಎಂದು ಹೆಸರು.
kannada grammar swaragalu
ವರ್ಣಮಾಲೆಯಲ್ಲಿ ಮೂರು ವಿಧಗಳು
ಅ) ಸ್ವರಾಕ್ಷರಗಳು
ಆ) ವ್ಯಂಜನಾಕ್ಷರಗಳು
ಇ) ಯೋಗವಾಹಗಳು
ಆ. ಸ್ವರಾಕ್ಷರಗಳು
ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು ಸ್ವರಾಕ್ಷರಗಳು.ಒಟ್ಟು ಸ್ವರಾಕ್ಷರಗಳು ೧೩.ಸ್ವರಾಕ್ಷರಗಳಲ್ಲಿ ಎರಡು ವಿಧ. :
೧) ಹ್ರಸ್ವಸ್ವರಗಳು
೨) ದೀರ್ಘಸ್ವರಗಳು
೧) ಹ್ರಸ್ವಸ್ವರ - ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ (ಅ, ಇ, ಉ, ಋ, ಎ, ಒ.) ಅಕ್ಷರಗಳು ಹ್ರಸ್ವಸ್ವರಗಳು.
೨) ದೀರ್ಘಸ್ವರ - ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ (ಆ, ಈ, ಊ, ಏ, ಐ, ಓ, ಔ) ಅಕ್ಷರಗಳು ದೀರ್ಘಸ್ವರಗಳು.
kannada grammar vyanjanagalu
ಇ. ವ್ಯಂಜನಾಕ್ಷರಗಳು
ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳು ವ್ಯಂಜನಾಕ್ಷರಗಳು (ಉದಾ : ಕ್ + ಅ = ಕ ; ಚ್ + ಅ = ಚ) ಒಟ್ಟು ವ್ಯಂಜನಾಕ್ಷರಗಳು = ೩೪
ವ್ಯಂಜನಾಕ್ಷರಗಳಲ್ಲಿ ಎರಡು ವಿಧ :
೧) ವರ್ಗೀಯ ವ್ಯಂಜನಗಳು
೨) ಅವರ್ಗೀಯ ವ್ಯಂಜನಗಳು
೧. ವರ್ಗೀಯ ವ್ಯಂಜನ ಕೋಷ್ಟಕ
ಇವು ಉತ್ಪತ್ತಿಯಾಗುವ ಸ್ಥಾನಗಳಿಗೆ ಅನುಗುಣವಾಗಿ ವರ್ಗ ಮಾಡಿರುವುದರಿಂದ ವರ್ಗೀಯ ವ್ಯಂಜನಗಳು.ಅಲ್ಪಪ್ರಾಣಾಕ್ಷರಗಳು = ಕಡಿಮೆ ಉಸಿರು ಕೊಟ್ಟು ಉಚ್ಚರಿಸಲಾಗುವ ವ್ಯಂಜನಗಳು
ಅಲ್ಪಪ್ರಾಣಾಕ್ಷರಗಳು.ಉದಾ : ಕ್, ಚ್, ಟ್, ತ್, ಪ್, ಗ್, ಜ್, ಡ್, ದ್, ಬ್.
ಮಹಾಪ್ರಾಣಾಕ್ಷರಗಳು = ಹೆಚ್ಚು ಉಸಿರು ಕೊಟ್ಟು ಉಚ್ಚರಿಸಲಾಗುವ ವ್ಯಂಜನಗಳು ಮಹಾಪ್ರಾಣಾಕ್ಷರಗಳು.ಉದಾ : ಖ್, ಛ್, ಠ್, ಥ್, ಫ್. ಘ್, ಝ್, ಢ್, ಧ್, ಭ್.
ಅನುನಾಸಿಕಾಕ್ಷರಗಳು = ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ವ್ಯಂಜನಗಳು ಅನುನಾಸಿಕಾಕ್ಷರಗಳು.ಉದಾ : ಙ್, ಞ್, ಣ್, ನ್, ಮ್.
೨. ಅವರ್ಗೀಯ ವ್ಯಂಜನಗಳು
‘ಯ್’ ಕಾರದಿಂದ ‘ಳ್’ ಕಾರದವರೆಗಿನ ೯ ಅಕ್ಷರಗಳು ಅವರ್ಗೀಯ ವ್ಯಂಜನಗಳು.ಉದಾ : ಯ್, ರ್, ಲ್, ವ್, ಶ್, ಷ್, ಸ್, ಹ್, ಳ್.
ಇವು ಉತ್ಪತ್ತಿಯಾಗುವ ಸ್ಥಾನಗಳು ಬೇರೆಬೇರೆಯಾಗಿರುವುದರಿಂದ, ಇವುಗಳನ್ನು ನಿರ್ದಿಷ್ಟವಾದ ವರ್ಗಗಳಲ್ಲಿ ಸೇರಿಸಿ ಹೇಳಲು ಬರುವುದಿಲ್ಲವಾದ್ದರಿಂದ ಇವನ್ನು ಅವರ್ಗೀಯ ವ್ಯಂಜನಗಳು ಎಂದು ಕರೆಯುವರು.
ಈ. ಯೋಗವಾಹಗಳು
‘ಯೋಗವಾಹ’ ಎಂದರೆ ‘ಜೊತೆಗೂಡಿ ಹೋಗು’ ಎಂದರ್ಥ. ಇವು ಯಾವುದಾದರೂ ಒಂದು ಸ್ವರಾಕ್ಷರದ ಜೊತೆಗೆ ಕೂಡಿಕೊಂಡರೆ ಮಾತ್ರ ಉಚ್ಚರಿಸಲು ಸಾಧ್ಯವಾಗುತ್ತದೆ.
ಯೋಗವಾಹಗಳಲ್ಲಿ ಎರಡು ವಿಧ:
೧) ಅನುಸ್ವಾರ (ಂ)
೨) ವಿಸರ್ಗ (ಃ)
ಉದಾ : ಸಿಂಹ, ದುಃಖ.
ಸಂಯುಕ್ತಾಕ್ಷರಗಳು
ವ್ಯಂಜನಕ್ಕೆ ವ್ಯಂಜನ ಸೇರಿಕೊಂಡು (ಸ್ವರದ ಸಹಾಯದಿಂದ) ಉಂಟಾಗುವ ಅಕ್ಷರಕ್ಕೆ ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯುವರು.
ಸಂಯುಕ್ತಾಕ್ಷರಗಳಲ್ಲಿ ಎರಡು ವಿಭಾಗಗಳಿವೆ.
೧) ಸಜಾತೀಯ ಸಂಯುಕ್ತಾಕ್ಷರಗಳು
೨) ವಿಜಾತೀಯ ಸಂಯುಕ್ತಾಕ್ಷರಗಳು
ಒಂದೇ ಜಾತಿಯ ಎರಡು ವ್ಯಂಜನಗಳು (ಸ್ವರದ ಸಹಾಯದಿಂದ) ಒಂದಕ್ಕೊಂದು ಸೇರಿದರೆ ಸಜಾತೀಯ ಸಂಯುಕ್ತಾಕ್ಷರಗಳಾಗುವುವು.
ಉದಾ :- ಅ + ಕ್ = ಕ , ಅ + ಕ್ + ಕ್ + ಅ = ಅಕ್ಕ. ಇಲ್ಲಿ ಕ್ + ಕ್ (+ಅ) ಇವು
ಸಜಾತೀಯ ವ್ಯಂಜನಗಳಾಗಿದ್ದು, ಇವು ಒಂದಕ್ಕೊಂದು ಕೂಡಿ ‘ಕ್ಕ’ ಎಂಬ ಸಜಾತೀಯ ಸಂಯುಕ್ತಾಕ್ಷರವಾಗಿದೆ.
ಉದಾ :- ಅಪ್ಪ, ಅಮ್ಮ, ಅಣ್ಣ, ಅಕ್ಕರ, ಅಕ್ಕಪಕ್ಕ, ರಕ್ಕಸ ಇತ್ಯಾದಿ.
ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು (ಸ್ವರದ ಸಹಾಯದಿಂದ) ಒಂದಕ್ಕೊಂದು ಕೂಡಿಕೊಂಡು ಉಂಟಾಗುವ ಅಕ್ಷರವು ವಿಜಾತೀಯ ಸಂಯುಕ್ತಾಕ್ಷರ ವೆನಿಸುವುದು.
ಉದಾ : ಭ್ + ಅ + ಕ್ + ತ್ + ಅ = ಭಕ್ತ. ಇಲ್ಲಿ ಕ್ + ತ್ (+ ಅ).ಇವು
ವಿಜಾತೀಯ ಸಂಯುಕ್ತಾಕ್ಷರ ವ್ಯಂಜನಗಳಾಗಿದ್ದು, ಇವೆರಡು ಕೂಡಿ ‘ಕ್ತ’ ಎಂಬ ವಿಜಾತೀಯ ಸಂಯುಕ್ತಾಕ್ಷರವಾಗಿದೆ.
ಉದಾ :- ಚಕ್ರ, ಆಜ್ಞೆ, ಸ್ತ್ರೀ, ವಸ್ತ್ರ ಇತ್ಯಾದಿ.
ವಚನಗಳು
ಆನೆಯು ಎಲ್ಲರ ಮೆಚ್ಚುಗೆಯನ್ನು ಗಳಿಸಿತ್ತು.
ಕಾಡಿನಲ್ಲಿ ವಿವಿಧ ರೀತಿಯ ಪ್ರಾಣಿಗಳು ವಾಸವಾಗಿದ್ದವು.
ಮೇಲಿನ ವಾಕ್ಯಗಳನ್ನು ಓದಿ. ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ.
‘ಆನೆ’ ಎಂಬುದು ‘ಒಂದು ಆನೆ’ ಎಂಬುದನ್ನು ಸೂಚಿಸುತ್ತದೆ. ‘ಪ್ರಾಣಿಗಳು’ ಎಂಬುದು ‘ಒಂದಕ್ಕಿಂತ ಹೆಚ್ಚು’ ಎಂಬುದನ್ನು ಸೂಚಿಸುತ್ತದೆ.
ಜಿಂಕೆಯು ಈ ದಿನದ ಸಭೆಗೆ ಸಿದ್ಧವಾಗಿ ಬಂದಿತ್ತು.
ಬೆಕ್ಕುಗಳು ಸಭೆಯಲ್ಲಿ ಭಾಗವಹಿಸಿದ್ದವು.
ಮೇಲಿನ ವಾಕ್ಯಗಳನ್ನು ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ. ‘ಜಿಂಕೆ’ ಎಂಬುದು ‘ಒಂದು’ ಎಂಬುದನ್ನು ಸೂಚಿಸುತ್ತದೆ. ಇದು ಏಕವಚನ. ‘ಬೆಕ್ಕುಗಳು’ ಎಂಬುದು ‘ಒಂದಕ್ಕಿಂತ ಹೆಚ್ಚು’ ಎಂಬುದನ್ನು ಸೂಚಿಸುತ್ತದೆ. ಇದು ಬಹುವಚನ.
ಏಕವಚನ ಮತ್ತು ಬಹುವಚನಗಳಿಗೆ ಇನ್ನೂ ಕೆಲವು ಉದಾಹರಣೆಗಳು:
ಏಕವಚನ-ಬಹುವಚನ
ಪತ್ರ - ಪತ್ರಗಳು
ನಾಯಕ - ನಾಯಕರು
ತಮ್ಮ - ತಮ್ಮಂದಿರು
ರೈತ - ರೈತರು
ನಾಮಪದ
ವ್ಯಕ್ತಿ, ವಸ್ತು, ಸ್ಥಳ ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ ನಾಮಪದ ಎನ್ನುವರು.
ಉದಾಹರಣೆ : ಮಂಡ್ಯ, ತಿಮ್ಮಣ್ಣ, ಹುಲಿ, ಕಲ್ಲು ಇತ್ಯಾದಿ.
ಈ ಕೆಳಗೆ ಮೂರು ವಿಧದ ನಾಮಪದಗಳನ್ನು ಹೆಸರಿಸಲಾಗಿದೆ.
- ರೂಢನಾಮ.
- ಅಂಕಿತನಾಮ.
- ಅನ್ವರ್ಥನಾಮ.
ರೂಢನಾಮ : ರೂಢಿಯಿಂದ ಬಂದ ಪದಗಳಿಗೆ ರೂಢನಾಮ ಎನ್ನುವರು.
ಉದಾ : ನದಿ, ಪರ್ವತ, ಹೆಂಗಸು, ಪಟ್ಟಣ, ದೇಶ, ಇತ್ಯಾದಿ.
ಅಂಕಿತನಾಮ : ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲಅಂಕಿತನಾಮಗಳು.
ಉದಾ: ಕೂಡಲಸಂಗಮದೇವ, ಪುರಂದರವಿಠಲ, ಗಂಗಾ, ಬ್ರಹ್ಮಪುತ್ರ,ಭಾರತ ಇತ್ಯಾದಿ.
ಅನ್ವರ್ಥನಾಮ : ರೂಪ, ಗುಣ, ವೃತ್ತಿ, ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಇಟ್ಟಹೆಸರುಗಳೆಲ್ಲ ಅನ್ವರ್ಥನಾಮಗಳು.
ಉದಾ: ವ್ಯಾಪಾರಿ, ರೋಗಿ, ಯೋಗಿ, ಬಳೆಗಾರ, ಪೂಜಾರಿ, ಶಿಕ್ಷಕ, ವಿದ್ಯಾರ್ಥಿ ಇತ್ಯಾದಿ.
ಪ್ರತ್ಯಯಗಳ ಪರಿಚಯ
ಪ್ರತ್ಯಯಗಳು ನಾಮಪ್ರಕೃತಿಗೆ (ಮೂಲ ಪದಕ್ಕೆ) ನಿರ್ದಿಷ್ಟ ಅರ್ಥ ಬರುವಂತೆ ಮಾಡುತ್ತವೆ. ಪ್ರತ್ಯಯಗಳನ್ನು ಸ್ವತಂತ್ರವಾಗಿ ಬಳಸಲು ಬರುವುದಿಲ್ಲ. ಹಾಗೆ ಬಳಸಿದರೆ ಅರ್ಥವೂ ಬರುವುದಿಲ್ಲ. ವಾಕ್ಯ ರಚನೆಯ ಸಂದರ್ಭದಲ್ಲಿ ನಾಮಪ್ರಕೃತಿಗಳು ಪಡೆಯಬೇಕಾದ ಅರ್ಥ ವಿಶೇಷಗಳನ್ನು ತಂದುಕೊಡಲು ಸಹಾಯ ಮಾಡುವ ಕಾರಕಗಳೇ ಪ್ರತ್ಯಯಗಳು. ಇವುಗಳನ್ನು ವಿಭಕ್ತಿ ಪ್ರತ್ಯಯವೆಂದೂ ಕರೆಯುತ್ತಾರೆ.
‘ಮನೆ’ ಎಂಬುದು ನಾಮಪದದ ಮೂಲರೂಪ. ಇದನ್ನು ನಾಮಪ್ರಕೃತಿ ಎನ್ನುವರು. ಈ ನಾಮಪ್ರಕೃತಿಗೆ ಪ್ರತ್ಯಯಗಳು ಸೇರಿದಾಗ ‘ಪದ’ ಆಗುತ್ತದೆ.
ಉದಾ : ಮನೆ + ಉ = ಮನೆಯು, ಮನೆ + ಅಲ್ಲಿ = ಮನೆಯಲ್ಲಿ
ವಿಭಕ್ತಿ ಪ್ರತ್ಯಯ
ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಏನಾಗುವುದು ಎಂಬುದನ್ನು ಗಮನಿಸೋಣ.
ಲೇಖನ ಚಿಹ್ನೆಗಳು
ನಾವು ಬರೆದ ವಿಚಾರಗಳು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗಲೆಂದು ಅಲ್ಲಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನ ಚಿಹ್ನೆಗಳೆಂದು ಕರೆಯುವರು.
ಲೇಖನ ಚಿಹ್ನೆಗಳು
೧. ಪೂರ್ಣವಿರಾಮ ಚಿಹ್ನೆ (.)
೨. ಅರ್ಧವಿರಾಮ ಚಿಹ್ನೆ (;)
೩. ಅಲ್ಪ ವಿರಾಮ ಚಿಹ್ನೆ (,)
೪. ಪ್ರಶ್ನಾರ್ಥಕ ಚಿಹ್ನೆ (?)
೫. ಭಾವಸೂಚಕ ಚಿಹ್ನೆ (!)
೬. ಉದ್ಧರಣ ಚಿಹ್ನೆ (‘ ') (“ '')
೭. ಆವರಣ ಚಿಹ್ನೆ ( )
೮. ಸಮಾನಾರ್ಥಕ ಚಿಹ್ನೆ (=)
೯. ವಿವರಣ ಚಿಹ್ನೆ (: / :-)
ಪತ್ರಲೇಖನ
ನಾವು ಸಾಮಾನ್ಯವಾಗಿ ಇನ್ನೊಬ್ಬರ ಜೊತೆ ಮಾತಿನ ಮೂಲಕ ವಿಷಯ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ. ಅವರು ನೇರವಾಗಿ ಸಂಪರ್ಕಕ್ಕೆ ಸಿಗದಿದ್ದಾಗ ಅಂತಹ ಸಂದರ್ಭಗಳಲ್ಲಿ ಬರೆವಣಿಗೆಯ ಮೂಲಕ ಅವರಿಗೆ ವಿಷಯವನ್ನು ತಿಳಿಸುತ್ತೇವೆ.
ಹೀಗೆ ಸಂಗತಿ, ವಿಚಾರ, ವಿಷಯಗಳನ್ನು ಇನ್ನೊಬ್ಬರ ಜೊತೆ ಬರೆವಣಿಗೆಯ ಮೂಲಕ ಹಂಚಿಕೊಳ್ಳುವುದು ಇಲ್ಲವೇ ತಿಳಿಸುವುದನ್ನು ‘ಪತ್ರಲೇಖನ’ ಎನ್ನುತ್ತೇವೆ. ಪತ್ರ ಎಂದರೆ ಕಾಗದ, ಓಲೆ, ಬರೆದ ಕಾಗದ ಎಂಬ ಅರ್ಥಗಳಿವೆ.
೧. ಪತ್ರದ ಕೆಲವು ವಿಧಗಳು
೧. ವೈಯಕ್ತಿಕ ಪತ್ರಗಳು.
೨. ಮನವಿ ಪತ್ರಗಳು
೩. ಆಡಳಿತ ವಿಷಯಗಳಿಗೆ ಸಂಬಂಧಿಸಿದ ಪತ್ರಗಳು.
೪. ಜಾಹೀರಾತು ಮತ್ತು ಪ್ರಕಟಣೆ ಪತ್ರಗಳು.
೫. ವಿವಿಧ ಸಂಗ್ರಹಣೆ ಹಾಗೂ ಪತ್ರಿಕಾವರದಿ ಪತ್ರಗಳು.
೨. ಪತ್ರ ಬರೆಯುವಾಗ ಅನುಸರಿಸಬೇಕಾದ ಸಾಮಾನ್ಯ ನಿಯಮಗಳು:
೧. ಪತ್ರದ ಮೇಲ್ಭಾಗದಲ್ಲಿ ದಿನಾಂಕ, ಹೆಸರು, ವಿಳಾಸವಿರಬೇಕು.
೨. ಸೂಕ್ತವಾದ ಸಂಬೋಧನೆ ಬರೆಯಬೇಕು.
೩. ವಿಷಯಗಳನ್ನು ಅರ್ಥವತ್ತಾಗಿ ಸರಳ ಶೈಲಿಯಲ್ಲಿ ಬರೆಯಬೇಕು.
೪. ಔಚಿತ್ಯಪೂರ್ಣವಾದ ಕೋರಿಕೆ, ಹಾರೈಕೆ ಇರಬೇಕು. ಉದಾ: ಇತಿ ನಮಸ್ಕಾರ, ಇತಿ ಆಶೀರ್ವಾದ.
೫. ಪತ್ರದ ಕೊನೆಯಲ್ಲಿ ಸಹಿ ಹಾಕಬೇಕು.
೬. ಕವರ್ ಮತ್ತು ಪತ್ರದ ಮೇಲ್ಭಾಗದಲ್ಲಿ ಕಳುಹಿಸುವವರ ವಿಳಾಸವನ್ನು ಚಿಕ್ಕದಾಗಿ ಬರೆಯಬೇಕು.
೭. ಕವರಿನ ಇನ್ನೊಂದು ಬದಿಯಲ್ಲಿ ಕಳುಹಿಸಬೇಕಾದ ವಿಳಾಸವನ್ನು ಚಿಕ್ಕದಾಗಿ ಬರೆಯಬೇಕು.
೮. ಬರೆವಣಿಗೆಯು ಅಂದವಾದ ಶೈಲಿಯಲ್ಲಿ, ಆಕರ್ಷಕವಾಗಿ ಇರಬೇಕು.
೩. ಸಂಬೋಧನೆಗಳು:
ತಂದೆಗೆ - ತೀರ್ಥರೂಪ
ತಾಯಿಗೆ - ಮಾತೃಶ್ರೀ
ಗುರುಗಳಿಗೆ - ಪೂಜ್ಯ
ಗೆಳೆಯ/ಗೆಳತಿಗೆ - ಆತ್ಮೀಯ, ನಲ್ಮೆಯ, ಪ್ರೀತಿಯ
ಚಿಕ್ಕಪ್ಪ ದೊಡ್ಡಪ್ಪನಿಗೆ - ತೀರ್ಥರೂಪ ಸಮಾನ
ಚಿಕ್ಕಮ್ಮ ದೊಡ್ಡಮ್ಮ - ಮಾತೃಶ್ರೀ ಸಮಾನ
ಕಿರಿಯರಿಗೆ _ ಚಿರಂಜೀವಿ
ಹೀಗೆ ವೈಯಕ್ತಿಕ ಪತ್ರಗಳನ್ನು ಬರೆಯುವಾಗ ಬೇರೆ ಬೇರೆ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ಸಂಬೋಧನೆಗಳನ್ನು ಬಳಸುತ್ತೇವೆ. ಇದು ನಾವು ಅವರಿಗೆ ತೋರಿಸುವ ಗೌರವವನ್ನು ಸೂಚಿಸುತ್ತದೆ.
ಸಮಾನಾರ್ಥಕ ಪದಗಳು
ಒಂದು ವ್ಯಕ್ತಿ, ಪ್ರಾಣಿ, ವಸ್ತು ಇತ್ಯಾದಿಗಳಿಗೆ ಅದೇ ಅರ್ಥವನ್ನು ಸೂಚಿಸುವ ಹಲವಾರು ಇತರ ಪದಗಳು ಇರುತ್ತವೆ. ಹೀಗೆ ಒಂದು ಶಬ್ದಕ್ಕೆ ಸಮಾನವಾದ ಅರ್ಥವನ್ನು ಕೊಡುವ ಮತ್ತೊಂದು ಶಬ್ದಕ್ಕೆ ಸಮಾನಾರ್ಥಕ ಪದ ಎನ್ನುವರು.
ಉದಾ:- ಕಾಯಕ=ಕೆಲಸ, ಉದ್ಯೋಗ, ಕಸಬು, ಊಳಿಗ, ದುಡಿಮೆ.
ತಂಡ=ಪಕ್ಷ, ಬಣ, ಗುಂಪು, ಪಡೆ, ದಳ, ಹಿಂಡು, ಸಮೂಹ.
ಪದ್ಮ=ಕಮಲ, ತಾವರೆ, ಅರವಿಂದ, ವನಜ, ಸರೋಜ.
ಭಾಷೆ=ಮಾತು, ನುಡಿ, ವಚನ, ಆಣೆ, ಪ್ರತಿಜ್ಞೆ, ನಂಬಿಗೆಯ ನುಡಿ, ಬೆಂಬಲದ ವಚನ.
ನಾನಾರ್ಥಕ ಪದಗಳು
ಒಂದು ಶಬ್ದವು ಇತರ ಹಲವಾರು ಅರ್ಥಗಳನ್ನು ಸೂಚಿಸುವಂತಿದ್ದರೆ ಅದನ್ನು ನಾನಾರ್ಥಕ ಪದವೆಂದು ಕರೆಯುವರು.
ಉದಾ: ದಂಡ = ೧. ಶಿಕ್ಷೆ, ೨. ಕೋಲು, ೩. ಸೈನ್ಯ
ದಳ = ೧. ಸೈನ್ಯ, ೨. ಎಲೆ, ೩. ಗುಂಪು
ಅಂಗ = ೧. ಭಾಗ, ೨. ದೇಹ
ಮಡಿ = ೧. ಸಾಯಿ, ೨. ಶುದ್ಧವಾದದು
ಲಿಂಗಗಳು
೧. ಶಿವಪುರದಲ್ಲಿ ಒಬ್ಬ ಶಿವಭಕ್ತನಿದ್ದನು.
೨. ಭಜನೆಯ ಮಂದಿರಕ್ಕೆ ಒಬ್ಬ ಶರಣೆ ಬಂದಿದ್ದಳು.
೩. ನದಿಯ ಹತ್ತಿರ ಒಂದು ಮೊಸಳೆ ಇತ್ತು.
ಮೇಲಿನ ವಾಕ್ಯಗಳನ್ನು ಓದಿ. ಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ. ಶಿವಭಕ್ತ ಎಂಬ ಪದವು ‘ಗಂಡಸು’ ಎಂಬುವುದನ್ನು ಸೂಚಿಸುತ್ತದೆ. ‘ಶರಣೆ’ ಎಂಬ ಪದವು ‘ಹೆಂಗಸು’ಎಂಬುದನ್ನು ಸೂಚಿಸುತ್ತದೆ. ಆದರೆ ‘ಮೊಸಳೆ’ ಎಂಬ ಪದವು ‘ಗಂಡಸು’ ಎಂಬುದನ್ನಾಗಲೀ, ‘ಹೆಂಗಸು’ ಎಂಬುದನ್ನಾಗಲೀ ಸೂಚಿಸುತ್ತಿಲ್ಲ.
೧. ಆ ಊರಿನಲ್ಲಿ ಪ್ರಸಿದ್ಧ ರಾಜ ಇರುವನು.
೨. ಪುನೀತ್ ಬಹಳ ಒಳ್ಳೆಯವನು.
ಮೇಲಿನ ವಾಕ್ಯಗಳನ್ನು ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ, ‘ರಾಜ’. ‘ಪುನೀತ್’ ಎಂಬ ಪದಗಳು ‘ಗಂಡಸು’ ಎಂಬ ಅರ್ಥದಿಂದ ಬಳಕೆಯಾಗಿವೆ. ಇವು ಪುಲ್ಲಿಂಗಗಳು.
೧. ಸಿಂಧು ಬಲು ಅಪರೂಪದವಳು.
೨. ಆಸೆಯು ರಾಣಿಗಲ್ಲದೆ ಮತ್ತಾರಿಗೆ?
ಮೇಲಿನ ವಾಕ್ಯಗಳನ್ನು ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ, ‘ಸಿಂಧು’, ‘ರಾಣಿ’ ಎಂಬ ಪದಗಳು ‘ಹೆಂಗಸು’ ಎಂಬ ಅರ್ಥದಿಂದ ಬಳಕೆಯಾಗಿವೆ. ಇವು ಸ್ತ್ರೀಲಿಂಗಗಳು.
೧. ಗಿಳಿಯ ಮೈಬಣ್ಣ ಹಸಿರು.
೨. ಭರತನ ತೋಟದಲ್ಲಿ ಹಣ್ಣುಗಳಿವೆ.
ಮೇಲಿನ ವಾಕ್ಯಗಳನ್ನು ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ, ‘ಗಿಳಿ’. ‘ಹಣ್ಣು’ ಎಂಬ ಪದಗಳು ‘ಗಂಡಸು’ ಅಥವಾ ‘ಹೆಂಗಸು’ ಎಂಬ ಅರ್ಥದಿಂದ ಬಳಕೆಯಾಗಿಲ್ಲ. ಇವು ನಪುಂಸಕಲಿಂಗಗಳು.
ಒಟ್ಟಾರೆಯಾಗಿ ‘ಗಂಡಸು’ ಎಂಬ ಅರ್ಥದಿಂದ ಬಳಸುವ ಪದಗಳು ‘ಪುಲ್ಲಿಂಗಗಳು’. ಹೆಂಗಸು' ಎಂಬ ಅರ್ಥದಿಂದ ಬಳಸುವ ಪದಗಳು ‘ಸ್ತ್ರೀಲಿಂಗಗಳು’. ಗಂಡಸು ಅಥವಾ ಹೆಂಗಸು ಎಂಬ ಅರ್ಥದಿಂದ ಬಳಕೆಯಾಗದ ಪದಗಳು ‘ನಪುಂಸಕಲಿಂಗಗಳು’.
ಗುಣ ವಿಶೇಷಣ.
ನಾಮಪದದ ವಿಶೇಷ ಗುಣವನ್ನು ತಿಳಿಸುವ ಅಥವಾ ಸೂಚಿಸುವ ಪದವೇ ಗುಣ ವಿಶೇಷಣ.
ಉದಾ : ರಿತೇಶನ ಬಳಿ ಕರಿಯ ಮೊಲವಿದೆ.
ಇಲ್ಲಿ ‘ಕರಿಯ’ ಎಂಬುದು ಮೊಲದ ಬಣ್ಣವನ್ನು ತಿಳಿಸುತ್ತದೆ.
೧. ಕಾಂಚನಾ ಸುಂದರ ಹುಡುಗಿ.
೨. ದರ್ಶಿನಿ ಕೆಂಪು ಲಂಗವನ್ನು ತೊಟ್ಟಿದ್ದಾಳೆ.
೩. ರಾಘುವಿನ ಹತ್ತಿರ ದೊಡ್ಡ ವಿಮಾನವಿದೆ.
ಇಲ್ಲಿ ಅಡಿಗೆರೆ ಎಳೆಯಲಾದ ‘ಸುಂದರ’, ‘ಕೆಂಪು’, ‘ದೊಡ್ಡ’ ಈ ಪದಗಳನ್ನು ಗಮನಿಸಿರಿ. ಬಣ್ಣ, ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳಾಗಿವೆ. ಇವುಗಳನ್ನು ‘ಗುಣ ವಿಶೇಷಣ’ಗಳೆನ್ನುವರು.
ಸಂಧಿ ಪರಿಚಯ.
ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. ಅವನು + ಅಲ್ಲಿ ಎಂಬ ಎರಡು ಶಬ್ದಗಳನ್ನು ಕೂಡಿಸಿ ‘ಅವನಲ್ಲಿ’ ಎಂದು ಹೇಳುತ್ತೇವೆ. ಅಂದರೆ ಅವುಗಳನ್ನು ಕೂಡಿಸಿಯೇ ಹೇಳುತ್ತೇವೆ.
ಉದಾ : ಆಡು + ಇಸು = ಆಡಿಸು
ಮರ + ಅನ್ನು = ಮರವನ್ನು
ದೇವರು + ಇಗೆ = ದೇವರಿಗೆ
ಮಳೆ + ಕಾಲ = ಮಳೆಗಾಲ
ಹೀಗೆ ಎರಡು ಅಕ್ಷರಗಳ ಯಾವ ಕಾಲವಿಳಂಬವೂ ಇಲ್ಲದೆ ಪರಸ್ಪರ ಸೇರುವುದಕ್ಕೆ ‘ಸಂಧಿ’ ಎನ್ನುವರು.
ಪದ ಪದ ಸಂಧಿರೂಪ
ಅವನ + ಅಂಗಡಿ = ಅವನಂಗಡಿ
ಕುಲ + ಅನ್ನು = ಕುಲವನ್ನು
ಬೆಟ್ಟ + ತಾವರೆ = ಬೆಟ್ಟದಾವರೆ
ಮಳೆ + ಕಾಲ = ಮಳೆಗಾಲ
ಹೀಗೆ ಒಂದು ಪದ ಇನ್ನೊಂದು ಪದದೊಡನೆ ಸೇರಿದಾಗ ಪೂರ್ವಪದದ ಅಂತ್ಯದಲ್ಲಿ ಮತ್ತು ಉತ್ತರಪದದ ಆದಿಯಲ್ಲಿ ಮೂರು ಬಗೆಯ ಕರ‍್ಯಗಳು ನಡೆಯಬಹುದು. ಅಕ್ಷರವೊಂದು ಲೋಪವಾಗಬಹುದು, ಇನ್ನೊಂದು ಆಗಮಿಸಬಹುದು, ಒಂದು ಅಕ್ಷರ ಹೋಗಿ ಅದರ ಸ್ಥಾನದಲ್ಲಿ ಬೇರೆಯೇ ಅಕ್ಷರ ಬರಬಹುದು. ಇದನ್ನು ‘ಸಂಧಿಕಾರ್ಯ’ ಎನ್ನುವರು.
ಪೂರ್ವಪದ + ಉತ್ತರಪದ = ಸಂಧಿಕಾರ್ಯ
ಮಾತು + ಅನ್ನು = ಮಾತನ್ನು
(ಉ) + (ಅ) = ಉ ಲೋಪ
ಲೋಪಸಂಧಿ :
೧. ಮೇಲೆ + ಇಟ್ಟು = ಮೇಲಿಟ್ಟು
ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ‘ಮೇಲೆ’ ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ ‘ಎ’ ಎಂಬುದು ಇಲ್ಲಿ ಲೋಪವಾಗಿದೆ.
೨. ಮುಳ್ಳು + ಅನ್ನು = ಮುಳ್ಳನ್ನು
ಇಲ್ಲಿ ‘ಮುಳ್ಳು’ ಎಂಬ ಪೂರ್ವಪದದ ಕೊನೆಯಲ್ಲಿರುವ ಸ್ವರ ‘ಉ’ ಎಂಬುದು ಇಲ್ಲಿ ಲೋಪವಾಗಿದೆ. ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಲೋಪವಾದರೆ ಅದನ್ನು ‘ಲೋಪಸಂಧಿ’ ಎನ್ನುವರು.
ಇದರಂತೆ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ.
ಒಸರುತ್ತ + ಇದ್ದ = ಒಸರುತ್ತಿದ್ದ : ಅ ಸ್ವರ ಲೋಪವಾಗಿದೆ.
ಹುಡುಗರು + ಎಲ್ಲರು = ಹುಡುಗರೆಲ್ಲರು : ಉ ಸ್ವರ ಲೋಪವಾಗಿದೆ.
ಮೇಲೆ + ಏರು = ಮೇಲೇರು : ಎ ಸ್ವರ ಲೋಪವಾಗಿದೆ.
ಆಗಮಸಂಧಿ :
೧. ಹೊಲ + ಅನ್ನು = ಹೊಲವನ್ನು
ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಹೊಲವನ್ನು ಎಂಬ ಪದದಲ್ಲಿ ‘ವ’ ಎಂಬ ಅಕ್ಷರವು ಬಂದು ಸೇರಿಕೊಂಡಿದೆ.
೨.ಹೊಳೆ + ಅಲ್ಲಿ = ಹೊಳೆಯಲ್ಲಿ
ಇಲ್ಲಿ ‘ಹೊಳೆಯಲ್ಲಿ’ ಎಂಬ ಪದದಲ್ಲಿ ‘ಯ’ ಎಂಬ ಅಕ್ಷರವು ಬಂದು ಸೇರಿಕೊಂಡಿದೆ.ಹೀಗೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಒಂದು ಅಕ್ಷರ ಆಗಮವಾದರೆ ಅದನ್ನು ಆಗಮಸಂಧಿ ಎನ್ನುವರು.
ಈ ರೀತಿಯಾದ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ :
ಗಡಿಬಿಡಿ + ಇಂದ = ಗಡಿಬಿಡಿಯಿಂದ : ಯ ಆಗಮವಾಗಿದೆ.
ಆರಂಭ + ಆಗು = ಆರಂಭವಾಗು : ವ ಆಗಮವಾಗಿದೆ.
ಆದೇಶಸಂಧಿ :
೧. ಕೋಪ + ಕೊಂಡು = ಕೋಪಗೊಂಡು
ಮೇಲಿನ ಸಂಧಿಕಾರ್ಯವನ್ನು ಗಮನಿಸಿರಿ. ಕೋಪಗೊಂಡು ಎಂಬ ಪದದಲ್ಲಿ ಕ (ಕೊ) ಅಕ್ಷರದ ಬದಲಿಗೆ ಗ (ಗೊ) ಅಕ್ಷರ ಬಂದಿದೆ.
೨. ಮೈ + ತೊಳೆ = ಮೈದೊಳೆ
ಇಲ್ಲಿ ಮೈದೊಳೆ ಎಂಬ ಪದದಲ್ಲಿ ‘ತ’ (ತೊ) ಅಕ್ಷರದ ಬದಲಿಗೆ ‘ದ’ (ದೊ) ಅಕ್ಷರ ಬಂದಿದೆ.ಹೀಗೆ ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರ ಬಂದರೆ ಅದನ್ನು ಆದೇಶಸಂಧಿ ಎನ್ನುವರು. ಇಲ್ಲಿ ಉತ್ತರ ಪದದ ಮೊದಲನೆಯ ಅಕ್ಷರವು ಬದಲಾಗುತ್ತದೆ.
ಸಾಮಾನ್ಯವಾಗಿ ಕ,ತ,ಪ ಗಳಿಗೆ ಕ್ರಮವಾಗಿ ಗ,ದ,ಬ ಗಳು ಆದೇಶವಾಗಿ ಬರುತ್ತವೆ.ಈ ರೀತಿಯಾದ ಇನ್ನು ಕೆಲವು ಉದಾಹರಣೆಗಳನ್ನು ಗಮನಿಸೋಣ :
ಕುಡು + ಕೋಲು = ಕುಡುಗೋಲು : ‘ಕ’ ದ ಬದಲು ‘ಗ’ ಆಗಿದೆ.
ಬೆಟ್ಟ + ತಾವರೆ = ಬೆಟ್ಟದಾದರೆ : ‘ತ’ ದ ಬದಲು ‘ದ’ ಆಗಿದೆ.
ಕಣ್ + ಪನಿ = ಕಂಬನಿ : ‘ಪ’ ದ ಬದಲು ‘ಬ’ ಆಗಿದೆ.
ಕನ್ನಡ ಪದಗಳು ಪರಸ್ಪರ ಸೇರಿ ಸಂಧಿಕಾರ್ಯ ನಡೆದಿದೆ. ಆದ್ದರಿಂದ ಇವುಗಳನ್ನು ‘ಕನ್ನಡ ಸಂಧಿ’ ಎಂದು ಕರೆಯುತ್ತೇವೆ.
ಪ್ರಕೃತಿಭಾವ.
ವಿರುದ್ಧಾರ್ಥಕ ಪದಗಳು.
ದಿನನಿತ್ಯ ಮಾತನಾಡುವಾಗ, ಬರೆಯುವಾಗ ಬಳಸುವ ಪದಗಳಲ್ಲಿ ವಿರುದ್ಧವಾದ ಅರ್ಥವಿರುವ ಕೆಲವು ಪದಗಳನ್ನು ಇಲ್ಲಿ ಕೊಡಲಾಗಿದೆ.
ಪದ ವಿರುದ್ಧಾರ್ಥಕ ಪದ
- ಅನುಭವ x ಅನನುಭವ
- ಆದಿ x ಅನಾದಿ
- ಉತ್ತಮ x ಅಧಮ
- ಉನ್ನತಿ x ಅವನತಿ
- ಗರ್ವಿ x ನಿಗರ್ವಿ
PLEASE DO NOT ENTER ANY SPAM LINK IN THE COMMENT BOX